Thursday 12 July 2018

ಶ್ರೀ ರಾಮಕೃಷ್ಣ ವಚನವೇದದ ಕತೃವಿನ ಕುರಿತಾದ ಪಕ್ಷಿನೋಟ


 ಮಹೇಂದ್ರನಾಥ ಗುಪ್ತ
ರಾಮಕೃಷ್ಣ ಪರಮಹಂಸರ ಅನುಯಾಯಿಗಳಲ್ಲಿ ಅತ್ಯಂತ ಶ್ರೇಷ್ಠ ಸ್ಥಾನ ಪಡೆದ ಪ್ರಮುಖರಲ್ಲಿ ಮಹೇಂದ್ರನಾಥ ಗುಪ್ತ ಅವರ ಹೆಸರು ಅಜರಾಮರವಾದದ್ದು. ರಾಮಕೃಷ್ಣ ವಚನವೇದವನ್ನು ತೆರೆದವರಿಗೆ ಅದರ ಅಂತರಂಗವನ್ನು ತೆರೆದಿಟ್ಟ, ಹೆಜ್ಜೆ ಹೆಜ್ಜೆಗೂ ರಾಮಕೃಷ್ಣ ಪರಮಹಂಸರೊಡನಿದ್ದು ಅವರ ಬದುಕನ್ನು, ಪ್ರತಿಯೊಂದೂ ಮಾತನ್ನು, ಆಲಿಸಿ, ದಾಖಲಿಸಿ ಲೋಕಕ್ಕೆ ಕೊಡುಗೆ ನೀಡಿದ ಮಹಾನುಭಾವರ ಬಗ್ಗೆ ಪೂಜ್ಯ ಭಾವನೆ ತಾನೇ ತಾನಾಗಿ ಒಡಮೂಡುತ್ತದೆ.

ರಾಮಕೃಷ್ಣ ಪರಮಹಂಸರ ಅನುಯಾಯಿಗಳಲ್ಲಿ’ ‘ಮತ್ತುಮಾಸ್ಟರ್ ಮಹಾಶಯಮುಂತಾದ ಪ್ರಖ್ಯಾತ ಹೆಸರುಗಳಿಂದ ಗೌರವಿಸಲ್ಪಟ್ಟ ಮಹೇಂದ್ರನಾಥ ಗುಪ್ತರು ಮಾರ್ಚ್ 12, 1854 ವರ್ಷದಲ್ಲಿ ಜನಿಸಿದರು. ಮಾಸ್ಟರ್ ಮಹಾಶಯರು ರಾಮಕೃಷ್ಣ ಪರಮಹಂಸರ ಆತ್ಮೀಯ ಅನುಯಾಯಿ, ಸ್ವಾಮಿ ವಿವೇಕಾನಂದರಂತಹ ರಾಮಕೃಷ್ಣ ಪರಮಹಂಸರ ಶಿಷ್ಯರ ಆತ್ಮೀಯ ಗೆಳೆಯ ಮಾತ್ರರಲ್ಲ, ಮುಂದಿನ ತಲೆಮಾರಿನಲ್ಲಿ ಭಾರತೀಯ ಆಧ್ಯಾತ್ಮ ಕಂಡ ವಿಶಿಷ್ಟ ವ್ಯಕ್ತಿಗಳಲ್ಲೊಬ್ಬರಾದಯೋಗಿಯೊಬ್ಬರ ದಿನಚರಿಯಂತಹ ಪುಸ್ತಕಗಳನ್ನು ಲೋಕಕ್ಕೆ ಕೊಡುಗೆ ನೀಡಿದ ಪರಮಹಂಸ ಯೋಗಾನಂದರ ಗುರುಗಳೂ ಆಗಿದ್ದರು.

ಮಧುಸೂದನ್ ಗುಪ್ತಾ ಮತ್ತು ಸ್ವಾಮಾಮಯಿ ದೇವಿ ದಂಪತಿಗಳ ಪುತ್ರರಾಗಿ ಮಹೇಂದ್ರನಾಥರು ಮಾರ್ಚ್ 12, 1854ರಂದು ಕಲ್ಕಾತ್ತಾ ಬಳಿಯ ಶಿಮೂಲಿಯಾ ಎಂಬಲ್ಲಿ ಜನಿಸಿದರು. ಹರೇ ಎಂಬ ಶಾಲೆಯಲ್ಲಿ ಪ್ರಾರಂಭಿಕ ಶಿಕ್ಷಣ ಪೂರೈಸಿದ ಮಹೇಂದ್ರನಾಥರು, ಮುಂದೆ 1874 ವರ್ಷದಲ್ಲಿ ಪ್ರೆಸಿಡೆನ್ಸಿ ಕಾಲೇಜಿನಿಂದ ಶ್ರೇಷ್ಠ ದರ್ಜೆಯಲ್ಲಿ ಬಿ. ಪದವಿ ಪಡೆದರು. 1874 ವರ್ಷದಲ್ಲಿ ಅವರು ನಿಕುಂಜಾದೇವಿ ಅವರನ್ನು ವಿವಾಹವಾದರು. ಸ್ವಲ್ಪಕಾಲ ಸರ್ಕಾರಿ ಸೇವೆ ಮತ್ತು ವ್ಯಾಪಾರಿ ಮಳಿಗೆಯಲ್ಲಿ ಕೆಲಸ ಮಾಡುತ್ತಿದ್ದರು. ನಂತರದಲ್ಲಿ ಹಲವಾರು ಕಾಲೇಜುಗಳಲ್ಲಿ ಇಂಗ್ಲಿಷ್, ಮನಃಶ್ಯಾಸ್ತ್ರ ಮತ್ತು ಅರ್ಥಶಾಸ್ತ್ರಗಳನ್ನು ಬೋಧಿಸುತ್ತಿದ್ದ ಮಹೇಂದ್ರನಾಥರು, ಕಡೆಗೆ ಈಶ್ವರ ಚಂದ್ರ ವಿದ್ಯಾಸಾಗರರ ಉನ್ನತ ಪ್ರೌಢಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿಮಾಸ್ಟರ್ ಮಹಾಶಯಎಂದು ಗೌರವಿಸಲ್ಪಡುತ್ತಿದ್ದರು. ಮಹೇಂದ್ರನಾಥರಿಗೆಮಾಸ್ಟರ್ ಮಹಾಶಯಎಂಬ ಇದೇ ಸಂಭೋಧನೆ ರಾಮಕೃಷ್ಣರ ಶಿಷ್ಯ ವೃಂದದಲ್ಲೂ ನಿರಂತರವಾಗಿ ಚಾಲ್ತಿಯಲ್ಲಿತ್ತು. ಸ್ವಾಮಿ ವಿವೇಕಾನಂದರಂತಹ ಆಪ್ತ ಒಡನಾಡಿಗಳು ಅವರನ್ನುಎಂದು ಸಂಬೋಧಿಸುತ್ತಿದುದೂ ಉಂಟು.

ರಾಮಕೃಷ್ಣರ ಬಳಿ ಬರುತ್ತಿದ್ದ ಅನೇಕ ಶಿಷ್ಯರು ಪ್ರಾರಂಭದಲ್ಲಿದ್ದಂತೆ, ಮಹೇಂದ್ರನಾಥರೂ ಬ್ರಹ್ಮ ಸಮಾಜದೊಂದಿಗೆ ಸಂಪರ್ಕ ಹೊಂದಿದ್ದರು. ತಮ್ಮ ಬಾಲ್ಯದಲ್ಲಿಯೇ ತಾಯಿಯನ್ನು ಕಳೆದುಕೊಂಡಿದ್ದ ಮಹೇಂದ್ರನಾಥರು, ವಿದ್ಯಾಭ್ಯಾಸದಲ್ಲಿ ಸಾಕಷ್ಟು ಸಾಧಿಸಿದ್ದಾಗ್ಯೂ, ತಾವಿದ್ದ ಅವಿಭಕ್ತ ಕುಟುಂಬದಲ್ಲಿ ತುಂಬಿ ತುಳುಕುತ್ತಿದ್ದ ಜಂಜಾಟಗಳಿಂದ ಮಾನಸಿಕ ಕ್ಷೋಭೆಗೊಳಗಾಗಿದ್ದರು. ಜಂಜಾಟಗಳಿಗೆ ಕೊನೆ ಕಾಣದೆ ಅದು ವೃದ್ಧಿಯಾಗುತ್ತಲೇ ಇದ್ದಾಗ, ಅದರಿಂದ ಜಿಗುಪ್ಸೆಗೊಂಡಿದ್ದ ಅವರು ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಣಯಕ್ಕೂ ಬಂದಿದ್ದರಂತೆ. ಒಂದು ಹಂತದಲ್ಲಿ ಅವರ ಸಂಬಂಧಿಯೊಬ್ಬರು ಒಮ್ಮೆ ಇವರನ್ನು ರಾಮಕೃಷ್ಣ ಪರಮಹಂಸರು ನೆಲೆಗೊಂಡಿದ್ದ ದಕ್ಷಿಣೇಶ್ವರದ ಕಾಳಿ ದೇಗುಲದ ಉದ್ಯಾನವನಕ್ಕೆ ಕರೆತಂದರು. ರಾಮಕೃಷ್ಣ ಪರಮಹಂಸರನ್ನು ಸಂದರ್ಭದಲ್ಲಿ ಪ್ರಪ್ರಥಮ ಬಾರಿಗೆ ಭೇಟಿಯಾದ ಮಹೇಂದ್ರನಾಥ ಗುಪ್ತರ ಜೀವನದಲ್ಲಿ ಹೊಸ ತಿರುವೊಂದು ಮೂಡಿಬಂತು. ಬಹಳಷ್ಟು ವರ್ಷಗಳ ನಂತರದಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಮಹೇಂದ್ರನಾಥ ಗುಪ್ತರುಫೆಬ್ರುವರಿ 1882 ಮಾಸದಲ್ಲಿ ಥಾಕುರರನ್ನು (ರಾಮಕೃಷ್ಣ ಪರಮಹಂಸರನ್ನು) ಪ್ರಥಮ ಬಾರಿಗೆ ಕಂಡ ದಿನ ನನ್ನ ಬದುಕಿನ ಅತ್ಯಂತ ಶ್ರೇಷ್ಠ ದಿನವಾಗಿದೆಎಂದು ಹೇಳಿದ್ದಾರೆ.

ರಾಮಕೃಷ್ಣ ಪರಮಹಂಸರನ್ನು ಮಹೇಂದ್ರನಾಥ ಗುಪ್ತರು ನೇರವಾಗಿ ಕಂಡದ್ದೇನೋ ಅದೇ ಮೊದಲಬಾರಿ. ಆದರೆ, ರಾಮಕೃಷ್ಣ ಪರಮಹಂಸರ ದರ್ಶನದ ಸೌಭಾಗ್ಯ ನನಗೆ ಚಿಕ್ಕಂದಿನಲ್ಲೇ ದೊರೆತಿತ್ತು ಎಂದು ನನ್ನ ಅಂತರಾತ್ಮ ಗುರುತಿಸುತ್ತಿದೆ ಎನ್ನುತ್ತಿದ್ದ ಮಾಸ್ಟರ್ ಮಹಾಶಯರು, ತಮ್ಮ ಬಾಲ್ಯದಲ್ಲಿ ನಡೆದ ಒಂದು ಅಪೂರ್ವ ಅನುಭಾವದ ಕಡೆಗೆ ನಮ್ಮ ಗಮನ ಸೆಳೆಯುತ್ತಾರೆ. “ಮಹೇಂದ್ರನಾಥನಿಗೆ ಆಗಿನ್ನೂ ನಾಲ್ಕು ವರ್ಷ ವಯಸ್ಸು. ತಮ್ಮ ತಾಯಿಯೊಂದಿಗೆ ದಕ್ಷಿಣೇಶ್ವರದ ಕಾಳಿ ದೇಗುಲಕ್ಕೆ ಬಂದಿದ್ದಾಗ ತಾಯಿಯಿಂದ ತಪ್ಪಿಸಿಕೊಂಡ ಬಾಲಕ ಮಹೇಂದ್ರನಾಥ ಅಳತೊಡಗಿದ. ಆಗ ಒಬ್ಬ ಮಹಾನ್ ತೇಜಸ್ಸಿನ ಯುವಕರೊಬ್ಬರು ಬಾಲಕ ಮಹೇಂದ್ರನಾಥನಿಗೆ ಅತ್ಯಂತ ಆಪ್ತತೆ ಹುಟ್ಟುವ ಹಾಗೆ ಸಮಾಧಾನ ಹೇಳಿದರಂತೆ. ಶ್ರೇಷ್ಠ ಅನುಭಾವವನ್ನು ನನಗೆ ನನ್ನ ಬಾಲ್ಯದಲ್ಲೇ ದಯಪಾಲಿಸಿದವರು ರಾಮಕೃಷ್ಣರೇ ಸರಿ ಎಂದು ನನ್ನ ಅಂತರಾತ್ಮ ಹೇಳುತ್ತಿದೆಹೀಗೆ ತಮಗಾದ ಅಪೂರ್ವ ಅನುಭವವನ್ನು ಮಾಸ್ಟರ್ ಮಹಾಶಯರು ತಮ್ಮ ಆಪ್ತರಲ್ಲಿ ತೆರೆದಿಟ್ಟಿದ್ದರು.

ಮಹೇಂದ್ರನಾಥ ಗುಪ್ತರಿಗೆ ಹದಿಮೂರನೆಯ ವಯಸ್ಸಿಗೆ ಬಂದಾಗಿನಿಂದಲೇ ತಮ್ಮ ಜೀವನದಲ್ಲಿ ಘಟಿಸಿದ ಪ್ರತಿಯೊಂದು ವಿಚಾರವನ್ನೂ ದಿನಚರಿಯಾಗಿ ದಾಖಲಿಸುವ ಹವ್ಯಾಸವಿತ್ತು. 1882 ವರ್ಷದಲ್ಲಿ ರಾಮಕೃಷ್ಣ ಪರಮಹಂಸರನ್ನು ಭೇಟಿಯಾದಾಗಿನಿಂದ ಅವರ ಬೋಧನೆಗಳಿಂದ ಅಪಾರವಾಗಿ ಆಕರ್ಷಿತರಾದ ಮಾಸ್ಟರ್ ಮಹಾಶಯರು ರಾಮಕೃಷ್ಣರು ಆಡುತ್ತಿದ್ದ ಪ್ರತಿಯೊಂದೂ ಮಾತು ಮಾತ್ರವಲ್ಲದೆ, ಅವರ ಪ್ರತೀ ಚಲನವಲನಗಳನ್ನೂ ಒಬ್ಬ ಶೀಘ್ರಲಿಪಿಕಾರನಂತೆ ಎಂದು ಹೇಳುವುದಕ್ಕಿಂತ ಒಬ್ಬ ಶ್ರೇಷ್ಠ ದೃಷ್ಟಾರನಂತೆ ದಾಖಲಿಸಿಕೊಳ್ಳಲು ಮೊದಲುಮಾಡಿದರು. ಇದನ್ನು ಕೇವಲ ಆತ್ಮಸಂತೋಷಕ್ಕಾಗಿ ಮಾಡುತ್ತಿದ್ದ ಮಹೇಂದ್ರನಾಥ ಗುಪ್ತರಿಗೆ ಮುಂದೆ ಇದೊಂದು ಮಹಾನ್ ಗ್ರಂಥವಾಗುತ್ತದೆಂಬ ಯಾವುದೇ ಪರಿವೆಯೂ ಇರಲಿಲ್ಲ. ತಮ್ಮ ದಾಖಲಾತಿ ಕಾರ್ಯದ ಬಗ್ಗೆ ಮಹೇಂದ್ರನಾಥರು ನೀಡುವ ವಿವರಣೆ ಮನೋಜ್ಞವಾಗಿದೆ.

ನಾನು ಮನೆಗೆ ಬಂದೊಡನೆಯೇ ನನ್ನ ಸ್ಮೃತಿಯಲ್ಲಿರುವ ಎಲ್ಲವನ್ನೂ ಬರೆಯಲು ತೊಡಗುತ್ತಿದ್ದೆ. ಹಲವಾರು ಬಾರಿ ನಾನು ಇಡೀ ರಾತ್ರಿಯೆಲ್ಲಾ ಎಚ್ಚರವಾಗಿದ್ದುಕೊಂಡು ಕೆಲಸವನ್ನು ಮಾಡುತ್ತಿದ್ದೆ. ಒಮ್ಮೊಮ್ಮೆ ನಾನು ಏಳು ದಿನಗಳವರೆಗೆ ಒಂದೇ ಸಮನೆ ಕೂತು, ಏನು ಮಾತುಕತೆಯಾಯಿತು, ಯಾವ ಹಾಡುಗಳನ್ನು ಹಾಡಲಾಯಿತು, ಹಾಡುಗಳನ್ನು ಯಾವ ಕ್ರಮದಲ್ಲಿ ಹಾಡಲಾಯಿತು, ಯಾವ ಸಮಯದಲ್ಲಿ ರಾಮಕೃಷ್ಣರು ಸಮಾಧಿಸ್ತರಾಗುತ್ತಿದ್ದರು ಹೀಗೆ ಸಕಲ ವಿಚಾರಗಳನ್ನೂ ಚಿಂತಿಸುತ್ತಾ ದಾಖಲಿಸುತ್ತಾ ಹೋಗುತ್ತಿದ್ದೆ. ಬಹಳಷ್ಟು ವೇಳೆ ನನಗೆ ನಾನು ಬರೆದ ವಿವರಗಳು ತೃಪ್ತಿ ಕೊಡುತ್ತಿರಲಿಲ್ಲ. ಸಂದರ್ಭಗಳಲ್ಲಿ ನಾನು ತಕ್ಷಣವೇ ಧ್ಯಾನಕ್ಕೆ ತೊಡಗುತ್ತಿದ್ದೆ. ಕೂಡಲೇ ನನ್ನಲ್ಲಿ ಸರಿಯಾದ ಚಿತ್ರಗಳು ಮೂಡತೊಡಗುತ್ತಿದ್ದವು. ಒಂದು ಕಾರಣದಿಂದಲೇ ಇರಬೇಕು. ಘಟನೆಗಳು ನಡೆದ ಭೌತಿಕ ಸ್ಥಿತಿಯಿಂದ ನಾನು ಬಹಳಷ್ಟು ದೂರಾವಾಗಿದ್ದಾಗಿಯೂ ಸಹಾ, ಅವೆಲ್ಲಾ ಹೊಚ್ಚ ಹೊಸದಾಗಿ, ಈಗ ತಾನೇ ನನ್ನ ಕಣ್ಮುಂದೆಯೇ ಸಂಭವಿಸಿದೆಯೇನೋ ಎಂಬಂತೆ ನನ್ನಲ್ಲಿ ತುಂಬಿಕೊಂಡಿವೆ.”

ಮುಂದೆ ಈಗ ನಾವು ಕನ್ನಡದಲ್ಲಿ ಕಂಡಿರುವಶ್ರೀ ರಾಮಕೃಷ್ಣ ವಚನ ವೇದ’, ಇಂಗ್ಲಿಷಿನಲ್ಲಿ ಪ್ರಖ್ಯಾತವಾಗಿರುವGospel of Sri Ramakrishnaಇವುಗಳ ಮೂಲರೂಪವಾಗಿ ಹೊರಬಂದದ್ದು ಮಾಸ್ಟರ್ ಮಹಾಶಯರು ಬಂಗಾಳಿ ಬಾಷೆಯಲ್ಲಿ ಮೇಲ್ಕಂಡಂತೆ ದಾಖಲಿಸಿ ಪ್ರಸ್ತುತ ಪಡಿಸಿದಕಥಾಮೃತ’. ಕಥಾಮೃತದ ಬರವಣಿಗೆ ಎಷ್ಟು ವ್ಯವಸ್ಥಾತ್ಮಕವಾಗಿದೆಯೆಂದರೆ, ಮಾಸ್ಟರ್ ಮಹಾಶಯರೇ ಪ್ರತೀ ಸಂಭಾಷಣೆ, ಘಟನೆಗಳನ್ನು ಮನೋಜ್ಞವಾಗಿ ವೀಕ್ಷಕ ವಿವರಣೆ ನೀಡುತ್ತಿರುವರು ಎಂದು ಭಾಸವಾಗುವುದರ ಜೊತೆ ಜೊತೆಗೆ ಅದು ಜರುಗಿದ ದಿನ, ಸಮಯ ಮತ್ತು ಸ್ಥಳಗಳ ವಿವರಗಳನ್ನೂ ಅತ್ಯಂತ ಸ್ಪಷ್ಟವಾಗಿ ನೀಡಿದ್ದಾರೆ. ಇದರಲ್ಲಿ ಮಾಡಿರುವ ವಿವರಗಳ ನಿಖರತೆಗೆ ಸ್ವಯಂ ಮಾತೆ ಶಾರದಾ ದೇವಿಯವರೂ, ಸ್ವಾಮಿ ವಿವೇಕಾನಂದರೂ ತಮ್ಮ ಪೂರ್ಣ ಅನುಮೋದನೆಯನ್ನು ನೀಡಿರುವುದು ಮಾಸ್ಟರ್ ಮಹಾಶಯರು ನೀಡಿರುವ ಶ್ರೇಷ್ಠ ಕಾಯಕಕ್ಕೆ ಸಂದ ಗೌರವವಾಗಿದೆ. ಕಥಾಮೃತದ ಮೊದಲ ನಾಲ್ಕು ಸಂಪುಟಗಳು 1902, 1904, 1908 ಮತ್ತು 1910 ವರ್ಷದಲ್ಲಿ ಪ್ರಕಟಗೊಂಡವು. ಮಾಸ್ಟರ್ ಮಹಾಶಯರು ಅನಾರೋಗ್ಯಕ್ಕೊಳಗಾದ ಕಾರಣದಿಂದ ಐದನೆಯ ಸಂಪುಟವು 1932ರಷ್ಟು ನಿಧಾನವಾಗಿ ಪ್ರಕಟಗೊಂಡಿತು. ಕಥಾಮೃತ ಎಂಬರಾಮಕೃಷ್ಣ ವಚನವೇದದಲ್ಲಿ ಮಾಸ್ಟರ್ ಮಹಾಶಯರ ಸಮ್ಮುಖದಲ್ಲಿ ರಾಮಕೃಷ್ಣ ಪರಮಹಂಸರ ಬದುಕಿನಲ್ಲಿ ಫೆಬ್ರುವರಿ 19, 1882ರಿಂದ, 24 ಏಪ್ರಿಲ್ 1886 ವರೆಗೆ ನಡೆದ ಘಟನೆಗಳ ಯಥಾವತ್ತಾದ ವರ್ಣನೆ ಇದೆ. ಇದನ್ನು ಮುಂದೆ ಸ್ವಾಮಿ ನಿಖಿಲಾನಂದರು ಮತ್ತು ಧರ್ಮ ಪಾಲ್ ಗುಪ್ತಾ ಮುಂತಾದವರು ಭಾಷಾಂತರಿಸಿದ್ದಾರೆ.

ರಾಮಕೃಷ್ಣ ವಚನವೇದವನ್ನು ಕಥಾಮೃತ ರೂಪದಲ್ಲಿ ಕೇಳಿದ ಶ್ರೀಮಾತೆ ಶಾರದಾದೇವಿಯವರು ಮಾಸ್ಟರ್ ಮಹಾಶಯರಿಗೆ ಹೀಗೆ ಪತ್ರ ಬರೆದಿದ್ದಾರೆ.

ನನ್ನ ಪ್ರೀತಿಯ ಮಗು,

ಶ್ರೀ ರಾಮಕೃಷ್ಣರಿಂದ ನೀನು ಕೇಳಿದ ಮಾತುಗಳೆಲ್ಲವೂ ಸತ್ಯ. ಅವುಗಳನ್ನು ಪ್ರಕಟಿಸಲು ನಿನಗೆ ಯಾವ ಅಂಜಿಕೆಯೂ ಬೇಕಿಲ್ಲ. ಶ್ರೀರಾಮಕೃಷ್ಣರೇ ನಿನ್ನ ಬರಹಗಳ ಮೂಲಕ ಮಾತುಗಳನ್ನು ಬಿಟ್ಟುಹೋಗಿದ್ದಾರೆ. ಕಾಲದ ಅಗತ್ಯಕ್ಕನುಗುಣವಾಗಿ ಅವರು ಈಗ ಅದನ್ನು ಹೊರತರುತ್ತಿದ್ದಾರೆ. ಮಾತುಗಳು ಪ್ರಕಟವಾಗದಿದ್ದರೆ ಜನರ ಆಧ್ಯಾತ್ಮಿಕ ಜಾಗೃತಿಯುಂಟಾಗದು ಎಂಬುದನ್ನು ನೀನು ಮನಗಾಣಬೇಕು. ನಿನ್ನ ಬಳಿಯಿರುವ ಅವರ ಮಾತುಗಳೆಲ್ಲವೂ ಸತ್ಯಒಂದೊಂದು ಮಾತೂ ಸಹ. ನೀನು ಅದನ್ನು ಓದಿ ಹೇಳಿದಾಗ ಸ್ವತಃ ಶ್ರೀರಾಮಕೃಷ್ಣರೇ ಮಾತನಾಡಿದಂತೆ ನನಗೆ ಭಾಸವಾಯಿತು.

ಶ್ರೀಮಾತೆ

ಕಥಾಮೃತದ ಮೊದಲ ಭಾಗಗಳನ್ನು ಓದಿದ ಸ್ವಾಮಿ ವಿವೇಕಾನಂದರು ಮಾಸ್ಟರ್ ಮಹಾಶಯರಿಗೆ ಹೀಗೆ ಪತ್ರ ಬರೆದಿದ್ದಾರೆ

ನನ್ನ ಪ್ರೀತಿಯ ,

ನಿಮ್ಮ ಪುಸ್ತಿಕೆಗಾಗಿ ಅನೇಕ ವಂದನೆಗಳು. ಅದು ನಿಜವಾಗಿಯೂ ಅದ್ಭುತವಾಗಿದೆ. ಪ್ರಯತ್ನವು ಅತ್ಯಂತ ನವೀನವಾದುದು. ಹಿಂದೆ ಎಂದೂ ಒಬ್ಬ ಮಹಾನ್ ಗುರುವಿನ ಚರಿತ್ರೆಯು ಇಷ್ಟರಮಟ್ಟಿಗೆ ಲೇಖಕನ ಮನಸ್ಸಿನಿಂದ ವಿಕೃತಗೊಳ್ಳದೆ, ಸಾರ್ವಜನಿಕರಿಗೆ ಲಭ್ಯವಾಗಿರಲಿಲ್ಲ. ಭಾಷೆ ಕೂಡ ಸ್ವಚ್ಛವಾಗಿ ಮನಸ್ಸಿಗೆ ನಾಟುವಂತಿದೆ. ಜೊತೆಗೆ ಸರಳವಾಗಿಯೂ ಇದ್ದು, ಇದಕ್ಕೆ ಯಾವ ಪ್ರಶಂಸೆಯೂ ಸಾಲದು ಎಂಬಂತಿದೆ.

ನನಗೆ ಓದಿನಿಂದ ಉಂಟಾದ ಆನಂದ ಅವರ್ಣನೀಯವಾದುದು. ನಾನು ಇದನ್ನು ಓದುವಾಗ ನಿಜವಾಗಿಯೂ ಮೈಮರೆಯುವಂತಾಗುವುದು ಆಶ್ಚರ್ಯವಲ್ಲವೆ? ನಮ್ಮ ಗುರುದೇವರಾದ ಭಗವಾನರು ಎಷ್ಟು ಸ್ವಂತಿಕೆಯುಳ್ಳವರಾಗಿದ್ದರು! ನಮ್ಮಲ್ಲಿ ಪ್ರತಿಯೊಬ್ಬರೂ ಸ್ವತಂತ್ರ ಕಲ್ಪನಾಶಕ್ತಿ ಹೊಂದಿರಲೇಬೇಕು. ನಮ್ಮಲ್ಲಿ ಮತ್ತಾರೂ ಅವರ ಜೀವನ ಬರೆಯಲು ಪ್ರಯತ್ನಿಸದೆ ಇದ್ದುದಕ್ಕೆ ಏನು ಕಾರಣವಿದ್ದಿರಬಹುದು ಎಂದು ನನಗೆ ಈಗ ಅರ್ಥವಾಗುತ್ತಿದೆ. ಮಹತ್ಕಾರ್ಯ ನಿಮಗೇ ಮೀಸಲಾಗಿತ್ತು. ಅವರು ನಿಜವಾಗಿಯೂ ನಿಮ್ಮೊಡನೆಯೇ ಇದ್ದಾರೆ.

ಪ್ರೀತಿ ನಮಸ್ಕಾರಗಳೊಂದಿಗೆ
ವಿವೇಕಾನಂದ

ಮಾಸ್ಟರ್ ಮಹಾಶಯರರಾಮಕೃಷ್ಣ ವಚನವೇದದ ಬಗ್ಗೆವಿಶ್ವದ ಮಹಾನ್ ಗ್ರಂಥಕಾರರಲ್ಲೊಬ್ಬರಾದ ಆಲ್ಡಸ್ ಹಕ್ಸ್ಲೇ ಅವರು ಹೇಳುತ್ತಾರೆ.”ನನಗೆ ತಿಳಿದಿರುವಂತೆ ಸಂತ ಸಾಹಿತ್ಯದಲ್ಲಿಯೇ ಇದೊಂದು ವಿಶಿಷ್ಟ ಕೃತಿಯಾಗಿದೆ. ಯಾವ ಸಂತನೂ ಇಂತಹ ಸಮರ್ಥ, ಶ್ರಮವರಿಯದ ವರದಿಕಾರನನ್ನು ಪಡೆದಿರಲಿಲ್ಲ. ಹಿಂದೆಂದೂ ಯೋಗಿಯೊಬ್ಬನ ದೈನಂದಿನ ಕಿರುಘಟನೆಗಳು ಇಷ್ಟು ಸೂಕ್ಷ್ಮ ವಿವರಣೆಗಳೊಂದಿಗೆ ವಿವರಿಸಲ್ಪಟ್ಟಿರಲಿಲ್ಲ. ಹಿಂದೆಂದೂ ಶ್ರೇಷ್ಠ ಧಾರ್ಮಿಕ ಗುರುವೊಬ್ಬನ ಸಾಮಾನ್ಯ ಮಾತುಗಳನ್ನು ಇಷ್ಟು ಯಥಾರ್ಥವಾಗಿ ಬರವಣಿಗೆಗೆ ಇಳಿಸಿರಲಿಲ್ಲ. ಸಂಭಾಷಣೆಗಳಲ್ಲಿ ಗಹನ ಆಧ್ಯಾತ್ಮ ತತ್ವಗಳ ಜೊತೆಜೊತೆಗೆ ಹಾಸ್ಯರಸವೂ ಇದೆ. ಇಲ್ಲಿ ಹಳೆಯ ವಿಚಾರಗಳು ಅತ್ಯಂತ ಸತ್ಯಕ್ಕೆ ಸಂಬಂಧಪಟ್ಟ ಅತಿ ಗಂಭೀರ ಭಾವನೆಗಳಿಗೆ ಎಡೆಮಾಡಿಕೊಡುತ್ತವೆ.”.

ರಾಮಕೃಷ್ಣರ ಶಿಷ್ಯರಾಗಿ ಮಾಸ್ಟರ್ ಮಹಾಶಯರಾದ ಮಹೇಂದ್ರಗುಪ್ತರು ಹೇಗಿದ್ದರು ಎಂಬುದು ಒಂದು ಶ್ರೇಷ್ಠತೆಯಾದರೆ, ಅವರು ತಮ್ಮ ಸಹಜ ಬದುಕಿನಲ್ಲಿ ಹೇಗಿದ್ದರು ಎಂಬುದು ಮತ್ತೊಂದು ಶ್ರೇಷ್ಠತೆಯಾಗಿ ಕಾಣುತ್ತದೆ. ತಮಗೆ ಗುರುವಾಗಿದ್ದ ಮಾಸ್ಟರ್ ಮಹಾಶಯರ ಕುರಿತಾಗಿ, ನಮ್ಮ ದೇಶದ ಮಹಾನ್ ಆಧ್ಯಾತ್ಮಿಕ ಗುರುಗಳ ಪರಂಪರೆಯಲ್ಲಿ ನಿತ್ಯಪ್ರಕಾಶಿಸುತ್ತಿರುವ ಪರಮಹಂಸ ಯೋಗಾನಂದರು ತಮ್ಮ ಪ್ರಖ್ಯಾತ ಪುಸ್ತಕಯೋಗಿಯೊಬ್ಬರ ಆತ್ಮಕಥೆಯಲ್ಲಿ ಇವರ ಕುರಿತು ಒಂದು ಅಧ್ಯಾಯವನ್ನೇ ಮೀಸಲಿರಿಸಿದ್ದಾರೆ. “ನನ್ನ ಮಾಸ್ಟರ್ ಮಹಾಶಯರು ಜಗನ್ಮಾತೆಯ ಸುಪುತ್ರರೇ ಆಗಿದ್ದರು, ಅವರು ಪಾಠ ಮಾಡುತ್ತಿದ್ದ ರೀತಿ, ಅವರಲ್ಲಿದ್ದ ಸರಳತೆ, ಶ್ರೇಷ್ಠತೆ, ಸಹಜತೆ, ವಿದ್ವತ್ತು ಇವೆಲ್ಲಾ ನನಗೆ ಅವಿಸ್ಮರಣೀಯ ವಿಚಾರಗಳುಎಂದು ಪರಮಹಂಸ ಯೋಗಾನಂದರು ಭಕ್ತಿಭಾವಗಳೊಡನೆ ತಮ್ಮ ಗುರುಗಳನ್ನು ಸ್ಮರಿಸಿದ್ದಾರೆ.

ಮಹಾನ್ ಸಂತ ಮಾಸ್ಟರ್ ಮಹಾಶಯ ಮಹೇಂದ್ರನಾಥ ಗುಪ್ತರು 1932 ವರ್ಷದಲ್ಲಿಕಥಾಮೃತ ಐದನೆಯ ಸಂಪುಟ ಮುದ್ರಣಕ್ಕೆ ನೀಡಿದ ನಂತರದಲ್ಲಿ ಇನ್ನು ಬದುಕಿನಲ್ಲಿ ನನ್ನ ಕೆಲಸ ಮುಗಿಯಿತು ಎಂಬಂತೆ, ಜೂನ್ ಮಾಸದ 4 ದಿನಾಂಕದಂದು ಲೋಕಕ್ಕೆ ವಿದಾಯ ಹೇಳಿದರು. ಕಲ್ಕತ್ತೆಯ ಕಾಳಿ ದೇಗುಲದ ಬಳಿ ಇದ್ದ ಅವರ ನಿವಾಸವನ್ನುಕಥಾಮೃತ ಭವನವೆಂದು ಹೆಸರಿಸಲಾಗಿದೆ. ‘ರಾಮಕೃಷ್ಣ ವಚನವೇದವನ್ನು ನೀಡಿ ನಮ್ಮ ಬದುಕಿನಲ್ಲೂ ಅದನ್ನು ಓದಿ ಕಿಂಚಿತ್ತು ಪುನೀತರಾಗುವ ಅದ್ಭುತ ಅವಕಾಶವನ್ನು ನೀಡಿರುವ ಮಹಾನ್ ಮಾಸ್ಟರ್ ಮಹಾಶಯರಾದ ಮಹೇಂದ್ರನಾಥ ಗುಪ್ತರಿಗೆ ನಾವೆಷ್ಟು ಋಣಿಗಳಾಗಿದ್ದರೂ ಕಡಿಮೆಯೇ. ಮಹಾನ್ ಗುರುವಿಗೆ, ಗುರುಗಳ ಗುರುಗಳಾದ ರಾಮಕೃಷ್ಣ ಪರಮಹಂಸರಿಗೆ, ಮಾತೆ ಶಾರದಾ ದೇವಿಯವರಿಗೆ ಮತ್ತು ಮಹಾನ್ ಗುರು ಪರಂಪರೆಗೆ ಸೇರಿದ ಸ್ವಾಮಿ ವಿವೇಕಾನಂದರಾದಿಯಾದ ಸಕಲ ಗುರುಶ್ರೇಷ್ಠರಿಗೆ ನನ್ನ ನಮನಗಳು.

No comments:

Post a Comment