Wednesday 3 January 2018

ಶ್ರೀ ಶಾರದಾದೇವಿ ನಿಮಗೆ ನಮೋ ನಮಃ

ಶ್ರೀರಾಮಕೃಷ್ಣ ಪರಮಹಂಸರ ಪತ್ನಿಯಾದ ಶ್ರೀಮಾತೆ ಶಾರದಾ ದೇವಿ ಅವರು ಶ್ರೀ ರಾಮಕೃಷ್ಣ ಆಧ್ಯಾತ್ಮಿಕ ಪರಂಪರೆಗೆ ಮಹತ್ವದ ಕೊಡುಗೆ ನೀಡಿದವರಾಗಿದ್ದಾರೆ. ‘ಶ್ರೀ ಮಾ’ ಎಂದು ಶ್ರೀ ರಾಮಕೃಷ್ಣರ ಅನುಯಾಯಿಗಳಿಂದ ಸಂಬೋಧಿಸಲ್ಪಡುತ್ತಿದ್ದ ಶ್ರೀ ಶಾರದಾ ದೇವಿಯವರು ದಕ್ಷಿಣೇಶ್ವರದಲ್ಲಿ ಸ್ಥಾಪಿತಗೊಂಡ ಶ್ರೀ ಶಾರದ ಮಠ ಮತ್ತು ಶ್ರೀ ರಾಮಕೃಷ್ಣ ಶಾರದಾ ಮಿಷನ್ನಿನ ಆಧ್ಯಾತ್ಮಿಕ ಪ್ರೇರಕ ಶಕ್ತಿ.
ಜೀವನದಲ್ಲಿ ನಾವೆಲ್ಲರೂ ಕಷ್ಟಗಳು ಅಥವಾ ಕಷ್ಟಗಳು ಎಂದುಕೊಳ್ಳುವಂತಹ ಘಟನೆಗಳನ್ನು ಕಾಣುತ್ತಿರುತ್ತೇವೆ. ನಾವು ಕಷ್ಟಗಳು ಎಂದುಕೊಂಡಿರುವ ಗಾತ್ರದ ಹಲವು ಪಟ್ಟು ಹೆಚ್ಚು ಕಷ್ಟಪಡುತ್ತಿರುವ ಜನರನ್ನು ಪ್ರತಿನಿತ್ಯ ಕಾಣುತ್ತಲೇ ಇರುತ್ತೇವೆ. ಆ ಕಷ್ಟಗಳು ನಮ್ಮನ್ನು ಆದಷ್ಟು ಬಿಟ್ಟು ಹೋಗಬೇಕು ಎಂದು ತವಕಿಸುವುದು ಈ ಲೋಕದ ನಿತ್ಯ ಅನುಭವ. ಹಾಗಾಗಿ ನಮ್ಮ ದೃಷ್ಟಿ ಕಷ್ಟಗಳೆಂಬ ಕತ್ತಲೆಯ ಕಡೆಗೆ ನೆಟ್ಟಿರುವಷ್ಟು, ಬಿಡುಗಡೆಯ ಮುಕ್ತಿಯೆಂಬ ಬೆಳಕಿನ ಕಡೆಗೆ ಹೊರಳುವುದೇ ಇಲ್ಲ. ಜಗತ್ತಿನಲ್ಲಿ ಕಷ್ಟಗಳ ನಡುವೆ ಇದ್ದು ಬೆಳಕಿನತ್ತ ಮುಖ ಮಾಡಿನಿಂತ ಅಪೂರ್ವ ವ್ಯಕ್ತಿತ್ವ ಶ್ರೀಮಾತೆ ಶಾರದಾದೇವಿಯವರದ್ದು.
ಸ್ವಾಮಿ ನಿತ್ಯಾನಂದರು ಬರೆದಿರುವ ಶ್ರೀಮಾತೆ ಶಾರದಾದೇವಿ ಪುಸ್ತಕದ ಹಿಂಬದಿಯಲ್ಲಿ ಈ ಮಾತುಗಳಿವೆ “ಶ್ರೀಮಾತೆಯವರ ಬದುಕು ಕೆಸರಿನಲ್ಲಿ ಅರಳಿದ ಕಮಲದಂತೆ. ಕೆಳಗೆ ನೋಡಿದರೆ ಸಂಸಾರದ ಕೆಸರು, ಕೊಳೆ, ಕಲ್ಮಶ ಎಲ್ಲಾ ಇವೆ. ಆದರೆ ಕಮಲ, ಕೆಳಗೆ ನೋಡುವುದಿಲ್ಲ, ಮೇಲೆ ನೋಡುವುದು, ಯಾವಾಗಲೂ ಸೂರ್ಯನ ದಿಕ್ಕಿಗೆ ತಿರುಗುವುದು. ಶ್ರೀಮಾತೆಯವರ ಜೀವನವೇ ಇದಕ್ಕೆ ಸಾಕ್ಷಿ. ಕೆಳಗೆ ನೋಡಬೇಡಿ. ಅಲ್ಲಿ ಕೊಳೆ ಇದೆ, ಕೆಸರಿದೆ ಎಂದು ತಪ್ಪು ಕಂಡು ಹಿಡಿಯಬೇಡಿ. ಕೆಸರಿನ ಲಕ್ಷಣವೇ ಅದು. ಆದರೆ ಮೇಲೆ ನೋಡಿ, ಆಗ ಭಗವಾನ್ ಸೂರ್ಯನನ್ನು ಕಾಣುತ್ತೇವೆ. ಕೆಳಗಿರುವುದನ್ನು ರಿಪೇರಿ ಮಾಡಲು ಹೋಗಬೇಡಿ. ಅದು ರಿಪೇರಿ ಆಗುವುದಕ್ಕೆ ಕಾಯುತ್ತಿಲ್ಲ. ಆದರೆ ಮೇಲೆ ನೀವು ನೋಡಿ. ಆಗ ಅವನ ದರ್ಶನ ನಿಮಗಾಗುವುದು.”
ಶಾರದಾ ದೇವಿ ಅವರು ಡಿಸೆಂಬರ್ 22, 1853ರಂದು ಪಶ್ಚಿಮ ಬಂಗಾಳದ ಜಯರಾಂಬಟಿ ಎಂಬಲ್ಲಿ ಜನಿಸಿದರು. ಅವರ ಅಂದಿನ ಹೆಸರು ಶಾರದಾಮಣಿ ಮುಖೋಪಾಧ್ಯಾಯ್. ಅವರ ತಂದೆಯ ಹೆಸರು ರಾಮಚಂದ್ರ ಮುಖೋಪಾಧ್ಯಾಯ್ ಮತ್ತು ತಾಯಿ ಶ್ಯಾಮ ಸುಂದರ ದೇವಿ. ತಂದೆ ಬಡರೈತರಾಗಿದ್ದು ಜೊತೆಗೆ ಪೂಜಾರಿಯಾಗಿ ತಮ್ಮ ದೊಡ್ಡ ಸಂಸಾರವನ್ನು ನಿರ್ವಹಿಸುತ್ತಿದ್ದರು. ಶಾರದಾ ದೇವಿ ಅವರಿಗೆ ಬಾಲ್ಯದಲ್ಲೇ ಪೌರಾಣಿಕ ಕಥೆಗಳನ್ನು ಕೇಳುವುದರಲ್ಲಿ ಅಪಾರ ಆಸಕ್ತಿ. ಮನೆಯ ಕೆಲಸಗಳನ್ನು ಮಾಡುವುದರಲ್ಲಿ ತಾಯಿಗೆ ಹೆಗಲು ನೀಡುವುದರ ಜೊತೆಗೆ ಇತರರಿಗೆ ಸಹಾಯ ಮಾಡುವ ಗುಣ ಸಹಾ ಅವರಲ್ಲಿ ಮಡುಗಟ್ಟಿತ್ತು. 1864ರ ಅವಧಿಯಲ್ಲಿ ಕ್ಷಾಮ ಪರಿಸ್ಥಿತಿ ಏರ್ಪಟ್ಟ ಸಂದರ್ಭದಲ್ಲಿ ಈಕೆ ತನ್ನ ತಂದೆ ತಾಯಿಗಳ ಜೊತೆ ಸೇರಿ, ಹಸಿದ ಜನರಿಗೆ ಜೀವ ಉಳಿಸಿಕೊಳ್ಳುವುದಕ್ಕೆ ಹಗಲಿರುಳೂ ಸಹಾಯ ಮಾಡಿದರು. ಮಣ್ಣಿನಲ್ಲಿ ಕಾಳಿ ಮತ್ತು ಲಕ್ಷ್ಮಿ ವಿಗ್ರಹಗಳನ್ನು ಮಾಡಿ ಪೂಜಿಸುವುದು ಆಕೆಗೆ ಬಲು ಇಷ್ಟವಾದ ಚಟುವಟಿಕೆಯಾಗಿತ್ತು. ಚಿಕ್ಕಂದಿನಿಂದಲೇ ಆಳವಾದ ಧ್ಯಾನದಲ್ಲಿ ತೊಡಗುತ್ತಿದ್ದುದು ಶಾರದದೇವಿಯವರಿಗೆ ರೂಢಿಯಾಗಿತ್ತಂತೆ.
ಇತ್ತ ಯಾವಾಗಲೂ ಪೂಜೆ ಪುನಸ್ಕಾರ ಧ್ಯಾನಗಳಲ್ಲಿ ಮುಳುಗಿ ಸಾಮಾನ್ಯರ ಬದುಕಿಗೆ ವ್ಯತಿರಿಕ್ತವಾಗಿ ಬದುಕುತ್ತಿದ್ದ ತಮ್ಮ ಮಗನಿಗೆ ಮದುವೆ ಮಾಡಿದರೆ ಆತ ಎಲ್ಲರಂತೆ ಸಹಜವಾಗಿರುತ್ತಾನೆ ಎಂದು ಭಾವಿಸಿದ ಶ್ರೀ ರಾಮಕೃಷ್ಣ ಪರಮಹಂಸರ ತಂದೆ ತಾಯಂದಿರು ಆತನಿಗೆ ಮದುವೆಯ ಏರ್ಪಾಡು ಮಾಡಿದರು. ಶ್ರೀ ರಾಮಕೃಷ್ಣರೇ, ಶಾರದಾ ದೇವಿಯನ್ನು ಮದುಮಗಳಾಗಿ ಸೂಚಿಸಿದರೆಂಬ ಮಾತೂ ಇದೆ. ಹೀಗೆ ಕೇವಲ ಐದು ವರ್ಷದಲ್ಲಿರುವಾಗಲೇ ಶ್ರೀ ಶಾರದಾದೇವಿ ಅವರಿಗೆ ಶ್ರೀ ರಾಮಕೃಷ್ಣ ಪರಮಹಂಸರೊಡನೆ 1853ರ ವರ್ಷದಲ್ಲಿ ವಿವಾಹವಾಗಿತ್ತು. ಆಗ ಶ್ರೀ ರಾಮಕೃಷ್ಣರ ವಯಸ್ಸು 23. ಅಂದಿನ ಬಂಗಾಳಿ ಸಂಪ್ರದಾಯಗಳಲ್ಲಿ ವಧೂವರರಲ್ಲಿ ಇಂತಹ ವಯಸ್ಸಿನ ಅಂತರ ಸರ್ವೇಸಾಧಾರಣವಾಗಿತ್ತು.
ವಿವಾಹದ ನಂತರದಲ್ಲಿ ತನ್ನ ತಂದೆ ತಾಯಂದಿರ ಪೋಷಣೆಯಲ್ಲೇ ಇದ್ದ ಶಾರದಾ ದೇವಿ, ತಮ್ಮ 14ನೆಯ ವಯಸ್ಸಿನಲ್ಲಿ ಶ್ರೀ ರಾಮಕೃಷ್ಣರಿದ್ದ ಕಾಮಾಪುಕುರಕ್ಕೆ ಬಂದು ಮೂರು ತಿಂಗಳು ಅವರ ಜೊತೆಯಲ್ಲಿದ್ದರು. ಈ ಸಮಯದಲ್ಲಿ ಶ್ರೀ ರಾಮಕೃಷ್ಣರು ಆಕೆಗೆ ಆಧ್ಯಾತ್ಮದಲ್ಲಿನ ಸಾಧನೆ, ವೈರಾಗ್ಯ ಮತ್ತು ಗುರಿಗಳ ಬಗ್ಗೆ ತಿಳಿಸಿಕೊಟ್ಟರು. ಮೂರು ತಿಂಗಳ ನಂತರದಲ್ಲಿ ಪುನಃ ಶಾರದಾ ದೇವಿ ತವರಿನಲ್ಲಿದ್ದರು. ಶ್ರೀ ರಾಮಕೃಷ್ಣರು ಆಗಾಗ ಭಾವ ಸಮಾಧಿಗೆ ಇಳಿಯುತ್ತಿದ್ದುದು ಬಹಳಷ್ಟು ಸಾಮಾನ್ಯ ಜನರ ಕಣ್ಣಿಗೆ ಹುಚ್ಚಾಗಿ ಕಂಡರೆ, ಕೆಲವೊಂದು ಜನರಿಗೆ ಅವರು ಮಹಾನ್ ಸಾಧುವಾಗಿ ಕಾಣತೊಡಗಿದರು. ಶ್ರೀ ರಾಮಕೃಷ್ಣರ ಮಾನಸಿಕ ಆರೋಗ್ಯದ ಬಗ್ಗೆ ಹಲವು ಮಾತುಗಳನ್ನು ಕೇಳಿದ್ದ ಶ್ರೀ ಶಾರದಾ ದೇವಿ ಅವರು, 1872ರಲ್ಲಿ 18ನೆಯ ವಯಸ್ಸಿನಲ್ಲಿ ತಮ್ಮ ಸ್ವಇಚ್ಚೆಯ ಮೇರೆಗೆ ದಕ್ಷಿಣೇಶ್ವರಕ್ಕೆ ಬಂದರು. ಅವರಿಗೆ ಶ್ರೀ ರಾಮಕೃಷ್ಣರು ಕರುಣಾಳುವಾಗಿಯೂ, ಸಹಾನುಭೂತಿಯುಳ್ಳವರಾಗಿಯೂ ಕಂಡುಬಂದರು. ಅವರಿಗೆ ಶೀಘ್ರದಲ್ಲೇ ಶ್ರೀ ರಾಮಕೃಷ್ಣರು ಸಾಮಾನ್ಯತೆಯಿಂದ ಹೊರಗೆ ಏರಿರುವ ಆಧ್ಯಾತ್ಮದ ಆಳದ ಅರಿವಾಯಿತು.
ದಕ್ಷಿಣೇಶ್ವರದಲ್ಲಿ ಶ್ರೀ ಶಾರದಾದೇವಿಯವರು ಒಂದು ಸಣ್ಣ ಕೋಣೆಯಲ್ಲಿ ಇರುತ್ತಿದ್ದರು. ಶ್ರೀ ರಾಮಕೃಷ್ಣರಿಗೆ ಮತ್ತು ಅವರನ್ನು ನೋಡಲು ಬರುತ್ತಿದ್ದವರಿಗೆ ಆಹಾರ ತಯಾರಿಸುವುದು ಅವರ ಕಾರ್ಯವಾಗುತ್ತಿತ್ತು. ಶ್ರೀ ರಾಮಕೃಷ್ಣರು ಶಾರದಾ ದೇವಿ ಅವರಿಗೆ ಮಂತ್ರಗಳನ್ನು ಹೇಳಿಕೊಟ್ಟಿದ್ದರು ಮತ್ತು ಹೇಗೆ ಜನರನ್ನು ಆಧ್ಯಾತ್ಮದ ಹಾದಿಗೆ ಪ್ರೇರಿಸಿ ಮಾರ್ಗದರ್ಶಿಸಬೇಕೆಂದು ಕೂಡಾ ಹೇಳುತ್ತಿದ್ದರು. ಶ್ರೀ ಶಾರದಾ ದೇವಿ ಅವರನ್ನು ಕಾಳಿಯ ಸ್ವರೂಪ ಎಂದೇ ಬಗೆದು ‘ಶ್ರೀ ಮಾ’ ಎಂದೇ ಅವರನ್ನು ಆಧ್ಯಾತ್ಮ ಭಾವದಲ್ಲಿ ಸಂಬೋಧಿಸುತ್ತಿದ್ದ ಶ್ರೀ ರಾಮಕೃಷ್ಣರು, ಅವರನ್ನು ಮಣೆಯ ಮೇಲೆ ಕಾಳಿಯ ಸ್ಥಾನದಲ್ಲಿ ಕುಳ್ಳಿರಿಸಿ ತ್ರಿಪುರಸುಂದರಿ ಮಾತೆ ಎಂದು ಶೋಡಷ ಪೂಜೆಯನ್ನು ಸಲ್ಲಿಸುತ್ತಿದ್ದರಂತೆ.
ಯಾವಾಗಲೂ ಶಾರದಾ ಮಾತೆಯವರು ತೆರೆಯ ಮರೆಯಲ್ಲೇ ಇರುತ್ತಿದ್ದರೂ ಅನೇಕ ಸ್ತ್ರೀಯರು ಶಾರದಾ ಮಾತೆಯವರ ವ್ಯಕ್ತಿತ್ವಕ್ಕೆ ಮಾರುಹೋಗಿ ಅವರ ಬಳಿ ಬಂದು ಜೀವನಪರ್ಯಂತ ಅವರ ಸಹಜೀವಿಗಳಾದರು.
ಶ್ರೀ ರಾಮಕೃಷ್ಣರು ತಮ್ಮ ಜೀವನದ ಕೊನೆಯ ದಿನಗಳಲ್ಲಿ ಗಂಟಲಿನ ಕ್ಯಾನ್ಸರ್ ಬೇನೆಗೆ ತುತ್ತಾದಾಗ ಶ್ರೀ ಮಾತೆ ಶಾರದಾ ದೇವಿ ಅವರು ಅವರಿಗೆ ಉಪಚಾರ ಮಾಡುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದರು. ಆಗಸ್ಟ್ 1886ರಲ್ಲಿ ಶ್ರೀ ರಾಮಕೃಷ್ಣ ಪರಮಹಂಸರು ನಿಧನರಾದ ಸಂದರ್ಭದಲ್ಲಿ ಶ್ರೀ ಮಾತೆಯವರು ವಿಧವೆಯಾಗಿ ತಮ್ಮ ಸುಮಂಗಲಿ ಲಕ್ಷಣಗಳನ್ನು ತೆಗೆಯಲು ಪ್ರಯತ್ನಿಸಿದಾಗಲೆಲ್ಲಾ ಶ್ರೀ ರಾಮಕೃಷ್ಣರು “ನಾನು ಒಂದು ಕೊಟಡಿಯಿಂದ ಮತ್ತೊಂದು ಕೊಟಡಿಗೆ ಹೋಗಿದ್ದೇನಷ್ಟೇ” ಎಂದು ಅನುಜ್ಞೆ ನೀಡಿ ತಮ್ಮನ್ನು ತಡೆದುದಾಗಿ ಹೇಳಿದ್ದಾರೆ.
ಶ್ರೀ ರಾಮಕೃಷ್ಣರ ನಿಧನಾನಂತರದಲ್ಲಿ ಶ್ರೀ ಮಾತೆ ಶಾರದಾ ದೇವಿ ಅವರು ಹಲವಾರು ಪುಣ್ಯ ಕ್ಷೇತ್ರಗಳಿಗೂ, ದೇಶದ ವಿವಿದೆಡೆಗಳಲ್ಲಿ ಸ್ವಾಮಿ ವಿವೇಕಾನಂದರ ನೇತೃತ್ವದಲ್ಲಿ ಶ್ರೀ ರಾಮಕೃಷ್ಣರ ಶಿಷ್ಯರು ಸ್ಥಾಪಿಸಿದ ಶ್ರೀ ರಾಮಕೃಷ್ಣ ಮಿಷನ್ನಿನ ಹಲವು ಶಾಖೆಗಳಿರುವ ಸ್ಥಳಗಳಿಗೆ ಭೇಟಿ ನೀಡಿದ್ದರು. ಅವರ ಜೀವನ ಬಡತನದ ಜೊತೆಗೆ ಮತ್ತು ಅವರ ನಿಧನರಾದ ಅವರ ಸಹೋದರರ ಸಂಸಾರ ತಾಪತ್ರಯಗಳಿಗೆ ಹೆಗಲುಕೊಟ್ಟು ಕಷ್ಟಪಡುವಂತಹ ಸ್ಥಿತಿಗಳಲ್ಲಿ ಬಳಲುವಂತಾಯ್ತು. ಇವೆಲ್ಲವುಗಳ ನಡುವೆಯೂ ಶಾಂತಿಯನ್ನು ಕಾಪಾಡಿಕೊಂಡು ಶ್ರೀ ರಾಮಕೃಷ್ಣರ ಶಿಷ್ಯರಿಗೆ ಮಾತೆಯಾಗಿ ತಮ್ಮ ಬಳಿ ಬರುವವರಿಗೆ ಆಧ್ಯಾತ್ಮದ ಸಿಂಚನವನ್ನು ನೀಡುತ್ತಾ ತಮ್ಮ ಜೀವನವನ್ನು ನಡೆಸಿದರು. ಸಹೋದರಿ ನಿವೇದಿತಾ, ಸಹೋದರಿ ದೇವಮಾತಾ ಹಾಗೂ ಶ್ರೀ ರಾಮಕೃಷ್ಣರ ಶಿಷ್ಯರು ಶ್ರೀಮಾತೆ ಅವರು ವಾತ್ಸಲ್ಯದ ಮಾತೃಭಾವದೊಂದಿಗೆ ಭಕ್ತಿಭಾವದಿಂದಿದ್ದರು.
ಶ್ರೀಮಾತೆಯವರ ಕೆಲವೊಂದು ದಿವ್ಯ ಸೂಕ್ತಿಗಳು ಇಂತಿವೆ:
“ಮನುಷ್ಯನ ಬುದ್ಧಿ ಎಷ್ಟು ಅಲ್ಪ! ಅವನಿಗೆ ಬೇಕಾಗಿರುವುದೇ ಒಂದಾದರೆ ಅವನು ಕೇಳುವುದೇ ಇನ್ನೊಂದು. ಶಿವನನ್ನು ಮಾಡಲು ಹೋಗಿ ಮಂಗನ ಮೂತಿ ಮಾಡಿಡುತ್ತಾನೆ. ಆದ್ದರಿಂದ ಆಸೆಗಳನ್ನೆಲ್ಲಾ ಭಗವಂತನ ಪಾದಗಳಲ್ಲಿ ಸಮರ್ಪಿಸಿಬಿಡುವುದೇ ಒಳ್ಳೆಯದು. ಅವನು ನಮಗೆ ಯಾವುದು ಒಳ್ಳೆಯದೋ ಅದನ್ನು ಮಾಡಲಿ. ಆದರೆ ಭಕ್ತಿ ವೈರಾಗ್ಯಗಳನ್ನು ಕೇಳಿಕೊಳ್ಳಬಹುದು. ಅವನ್ನು ಆಸೆಗಳ ಗುಂಪಿಗೆ ಸೇರಿಸಲಾಗುವುದಿಲ್ಲ.”
“ಒಂದೇ ಮಾತಿನಲ್ಲಿ ಹೇಳಬೇಕೆಂದರೆ, ಭಗವಂತನನ್ನು ಆಸೆಗಳಿಂದ ಪಾರುಮಾಡು ಎಂದು ಕೇಳಿಕೊಳ್ಳಬೇಕು. ಏಕೆಂದರೆ ಆಸೆಯೇ ಎಲ್ಲ ದುಃಖದ ಮೂಲ. ಮತ್ತೆ ಮತ್ತೆ ಜನನ ಮರಣಗಳಿಗೆ ತಳ್ಳುವುದೂ ಆಸೆಯೇ. ಮುಕ್ತಿಯ ಮಾರ್ಗದಲ್ಲಿ ಅದೇ ಅಡ್ಡಿ.”
“ಪ್ರಾಪಂಚಿಕ ಸಂಬಂಧಗಳು ಶಾಶ್ವತವಲ್ಲ. ಇಂದು ಅವೇ ಜೀವನದ ಸಾರಸರ್ವಸ್ವವೋ ಎಂಬಂತೆ ತೋರುತ್ತದೆ. ಆದರೆ ನಾಳೆ ಎಲ್ಲವೂ ಮಾಯವಾಗುತ್ತವೆ. ನಿನ್ನ ನಿಜವಾದ ಸಂಬಂಧ ದೇವರೊಂದಿಗೆ ಮಾತ್ರ.”
“ನೀನು ಮನುಷ್ಯ ಮಾತ್ರರನ್ನು ಪ್ರೀತಿಸಿದ್ದೆ ಆದರೆ ಕಷ್ಟಪಡಲೇಬೇಕಾಗುತ್ತದೆ. ಯಾರು ಭಗವಂತನನ್ನು ಮಾತ್ರವೇ ಪ್ರೀತಿಸುತ್ತಾನೋ ಅವನೇ ಧನ್ಯ. ಭಗವಂತನನ್ನು ಪ್ರೀತಿಸುವವನು ಕಷ್ಟಗಳಿಗೆ ಗುರಿಯಾಗುವುದಿಲ್ಲ.”
“ಬೇರೆಯವರಿಗಾಗಿ ನಿನ್ನ ಕರ್ತವ್ಯಗಳನ್ನು ಏನೇನು ಇರುತ್ತವೆಯೋ ಅವೆಲ್ಲವನ್ನೂ ಮಾಡು. ಆದರೆ ನಿನ್ನ ಪ್ರೀತಿಯನ್ನು ಭಗವಂತನಿಗೆ ಮಾತ್ರ ಕೊಡು. ಪ್ರಾಪಂಚಿಕ ಪ್ರೀತಿ ತನ್ನೊಂದಿಗೆ ಹೇಳಲಾಗದಷ್ಟು ಸಂಕಟವನ್ನು ತರುತ್ತದೆ.”
“ಆಸೆಯೇ ಎಲ್ಲಕ್ಕೂ ಕಾರಣ. ಆಸೆಯಿಲ್ಲದವನಿಗೆ ಯಾವ ಬಂಧನವಿದೆ? ನೋಡು, ನಾನು ಇವೆಲ್ಲದರ ಮಧ್ಯೆ ಇದ್ದೇನೆ. ಆದರೆ ನಾನು ಅವಕ್ಕೆ ಸ್ವಲ್ಪವೂ ಅಂಟಿಕೊಂಡಿಲ್ಲ. ಸ್ವಲ್ಪ ಕೂಡ ಅಂಟಿಕೊಂಡಿಲ್ಲ.”
“ಯಾವುದು ಆಕರ್ಷಿಸುತ್ತಿದೆಯೋ ಆ ಹೊರಗಡೆಯ ವಸ್ತು ಅಶಾಶ್ವತ ಎಂದು ಕಂಡುಕೊಳ್ಳಲು ಪ್ರಯತ್ನಿಸು. ನಿನ್ನ ಗಮನವನ್ನು ಭಗವಂತನ ಕಡೆಗೆ ಹರಿಸು.”
“ಸಂಸಾರದಲ್ಲಿ ಸುಖವೂ ಇದೆ, ದುಃಖವೂ ಇದೇ. ಹೀಗಿರುವಾಗ ಅದರ ಬಗ್ಗೆ ಸುಮ್ಮನೆ ತಲೆಕೆಡಿಸಿಕೊಂಡು ಮನಸ್ಸಿನ ಬಲವನ್ನೇಕೆ ಕಳೆದುಕೊಳ್ಳಬೇಕು.”
“ಮಗು, ನೀನು ಸಂಸಾರದಲ್ಲಿ ಇದ್ದರೆ ತಾನೇ ಏನಂತೆ? ಸಂಸಾರದಲ್ಲಿ ಇರುವುದು ಎಂದರೆ ನಿನ್ನ ಪಾಲಿಗೆ ಮರದ ನೆರಳಿನಲ್ಲಿ ಇದ್ದಂತೆ. ಸಂಸಾರವೇನು ದೇವರಿಂದ ಬೇರೆಯೇ? ದೇವರು ಎಲ್ಲೆಲ್ಲೂ ಇದ್ದಾನೆ.... ದೇವರು ನಿನ್ನನ್ನು ಎಲ್ಲಿಟ್ಟಿರುವನೋ ಅಲ್ಲೇ ತೃಪ್ತಿಯಿಂದಿರು. ದೇವರನ್ನು ಕರೆಯುವುದು, ಅವನನ್ನು ಪಡೆಯುವುದು, ಇದೇ ಗುರಿ. ನೀನು ಅವನನ್ನು ಕರೆದರೆ, ಅವನು ಕೈಹಿಡಿದು ನಡೆಸುತ್ತಾನೆ. ಅವನನ್ನು ನಂಬು. ನಿನಗೆ ಯಾವ ಭಯವೂ ಇರುವುದಿಲ್ಲ.”
ಶ್ರೀಮಾತೆ ಶಾರದಾ ದೇವಿ ಅವರು ತಮ್ಮ ಬಹುತೇಕ ದಿನಗಳನ್ನು ಕಲ್ಕತ್ತಾ ಮತ್ತು ಜಯರಾಂಬಟಿಗಳಲ್ಲಿ ಕಳೆದರು. ಜುಲೈ 20, 1920ರಂದು ತಮ್ಮ ಇಹಲೋಕದ ಬದುಕಿಗೆ ಮುಕ್ತಾಯ ಹೇಳಿದರು. ಬೇಲೂರು ಮಠದ ಆವರಣದಲ್ಲಿ ಅವರ ಅಂತ್ಯಕ್ರಿಯೆ ನಡೆದ ಸ್ಥಳದಲ್ಲೇ ಅವರ ದೇಗುಲ ನಿರ್ಮಿಸಲಾಗಿದೆ.
ಶ್ರೀ ಶಾರದಾ ದೇವಿ ನಿಮಗೆ ನನ್ನ ನಮೋ ನಮಃ

ಭಕ್ತಿಯಿಂದ 
ಅಕ್ಷಯ್ ಜಿ ಭಟ್

No comments:

Post a Comment