Saturday 30 December 2017

ಪೊಳಲಿಯಲ್ಲಿದೆ ಭಗವಾನ್ ಶ್ರೀ ರಾಮಕೃಷ್ಣ ಪರಮಹಂಸರ ದಿವ್ಯ ವಿಶ್ವಭಾವೈಕ್ಯ ಮಂದಿರ

ಪರಶುರಾಮ ಸೃಷ್ಠಿಯ ನಾಡು ಎಂದೇ ಕರೆಯಲ್ಪಡುವ ಪುಣ್ಯಭೂಮಿ ತುಳುನಾಡು. ಹಲವು ಸಂಸ್ಕøತಿಗಳ ಬೀಡು. ಹಲವು ಭಾಷೆ ,ಜಾತಿ, ಧರ್ಮದ ಜನರು ಇರುವ ಈ ಪ್ರಾಂತ್ಯ ಕಂಡು ಬರುವುದು ರಮಣೀಯ ಅರಬ್ಬಿ ಸಮುದ್ರದ ತಟದಲ್ಲಿ. ಅದೇ ಅವಿಭಜಿತ  ಉಡುಪಿ ಮತ್ತು ದಕ್ಷಿಣ ಕನ್ನಡ  ಜಿಲ್ಲೆ . 

ಇಂತಹಾ ಪರಂಪರೆಯುಳ್ಳ ಭೂಭಾಗದಲ್ಲಿ ಸಾವಿರಾರು ವರ್ಷಗಳ ಇತಿಹಾಸವುಳ್ಳ ದೇಗುಲಗಳು, ಬಸದಿಗಳು ಹಲವಾರು. ಇಂತಾಹುದೇ ಒಂದು ಪ್ರಾಚೀನ ದೇವಾಲಯ ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದ ಪೊಳಲಿಯ ಶ್ರೀ ರಾಜರಾಜೇಶ್ವರಿ ದೇವಾಲಯ.ಪುಣ್ಯ ನದಿ ಫಲ್ಗುಣಿಯ ದಡದಲ್ಲಿರುವ ಈ ದೇವಾಲಯವನ್ನು ಸುಮೇಧ ಮಹರ್ಷಿಯ ಆಣತಿಯಂತೆ ಸುರಥ ರಾಜ ಮತ್ತು ಸುಮೇಧ ಎಂಬ ವರ್ತಕನು ನಿರ್ಮಿಸಿದರೆಂದು ಪ್ರತೀತಿ.ಸುಮಾರು 10 ಅಡಿ ಎತ್ತರದ ಶ್ರೀ ರಾಜರಾಜೇಶ್ವರಿಯ ಮೃಣ್ಮಯ ಮೂರ್ತಿ ಇಲ್ಲಿನ ವಿಶೇಷ. ಜೊತೆಗೆ ಭದ್ರಕಾಳಿ ,ಗಣೇಶ,ಸುಬ್ರಹ್ಮಣ್ಯರ ಮೃಣ್ಮಯಮೂರ್ತಿಯನ್ನು ಕಾಣಬಹುದು. ಇತಿಹಾಸಗಳ ಪ್ರಕಾರ ಶ್ರೀ ಚಂಡೀ ಹೋಮ ಈ ದೇವಾಲಯದಿಂದ ಪ್ರಾರಂಭವಾಯಿತೆಂದು ಪ್ರತೀತಿ ಹಾಗೂ ಉಲ್ಲೇಖ ಸುಮಾರು 2000 ವರ್ಷಕ್ಕೂ ಮೇಲ್ಪಟ್ಟು ಶ್ರೀ ರಾಜಾರಾಜೇಶ್ವರಿ ಹಾಗೂ ಪರಿವಾರ ದೇವತೆಗಳ ಬೃಹದಾಕಾರದ ಮೃಣ್ಮಯ ಮೂರ್ತಿಗಳ ನಿರ್ಮಾಣವಾಯಿತೆಂದು ಉಲ್ಲೇಖವಿದೆ.

ದೇವಾಲಯದ ಸಮೀಪದಲ್ಲೇ ಇರುವ ಇನ್ನೊಂದು ಮಂದಿರ ಭಗವಾನ್ ಶ್ರೀ ರಾಮಕೃಷ್ಣ ಪರಮಹಂಸರ ದಿವ್ಯ ವಿಶ್ವಭಾವೈಕ್ಯ ಮಂದಿರ. ಪ್ರಶಾಂತವಾದ ವಾತವರಣದೊಂದಿಗೆ ಮನಸ್ಸಿಗೆ ಶಾಂತಿ ನೀಡುತ್ತಾ ಆದ್ಯಾತ್ಮಿಕ ಸಾಧಕರಿಗೆ ಪ್ರಶಸ್ತ ಜಾಗವೂ ಹೌದು.
ಈ ವಿಶ್ವ ಭಾವೈಕ್ಯ ಮಂದಿರ ನಿರ್ಮಾಣವಾದದ್ದು ಕೇವಲ 9 ವರ್ಷಗಳ ಹಿಂದೆ.ಗುರುದೇವ ಶ್ರೀ ರಾಮಕೃಷ್ಣ ಪರಮಹಂಸರ ಕೃಪಾರ್ಶಿವಾದದಿಂದ ಇಲ್ಲೊಂದು ಆಶ್ರಮ ನಿರ್ಮಾಣವಾಗಿ ಹಳ್ಳಿಗಳಲ್ಲಿ ಶ್ರೀ ರಾಮಕೃಷ್ಣ ಪರಮಹಂಸg, ಶ್ರೀಮಾತೆ ಶಾರದಾ ದೇವಿ ,ಸ್ವಾಮಿ ವಿವೇಕಾನಂದರ ಉಪದೇಶವನ್ನು ಪಸರಿಸಿ ಜನರಿಗೆ ಆದ್ಯಾತ್ಮದ ನಿಜಾನಂದವನ್ನು ನೀಡಬೇಕೆಂದು ಭಾವಿಸಿ ಪೊಳಲಿಯಲ್ಲಿ ರಾಮಕೃಷ್ಣ ತಪೋವನದ ಉಗಮವಾಯ್ತು.ಪ್ರಸ್ತುತ ಸ್ವಾಮಿ ವಿವೇಕಚೈತನ್ಯಾನಂದ ಇವರು ಆಶ್ರಮದ ಮೇಲ್ವಿಚಾರಣೆ ನಡೆಸುತ್ತಿದ್ದಾರೆ.

ಕಳೆದ 9 ವರ್ಷಗಳಿಂದ ರಾಮಕೃಷ್ಣ ತಪೋವನ ಯಾವುದೇ ಫಲಾಪೇಕ್ಷೆ ಇಲ್ಲದೇ ಅಶಕ್ತರಿಗೆ ಸೇವೆ ನೀಡುತ್ತಾ ಬಂದಿದೆ.ಸುಮಾರು 100ಂಕ್ಕೂ ಮಿಕ್ಕಿ ಮಕ್ಕಳು ಆಶ್ರಮದಲ್ಲಿ ಸಂಸ್ಕಾರಯುತ ಶಿಕ್ಷಣವನ್ನು ಉಚಿತವಾಗಿ ಪಡೆದಿದ್ದಾರೆ. ಪ್ರಸ್ತುತ 70 ಮಕ್ಕಳು ಆಶ್ರಮದಲ್ಲಿ ವಸತಿಯುತ ಶಿಕ್ಷಣ ಉಚಿತವಾಗಿ ಪಡೆಯುತ್ತಿದ್ದಾರೆ.

ಸ್ವಾಮಿ ವಿವೇಕಾನಂದರ ವಾಣಿ ” ಆತ್ಮಾನೋ ಮೋಕ್ಷಾರ್ಥಂ ಜಗತ್ ಹಿತಾಯ ಚಃ ” ಎಂಬ ಮಾತು ಸಾಕಾರಗೋಳ್ಳುತ್ತಿದೆ ಎನ್ನುವುದಕ್ಕೆ ಆಶ್ರಮದ ಕಾರ್ಯಕ್ರಮಗಳೇ ಜ್ವಲಂತ ಸಾಕ್ಷಿ. ಸಮೀಪದ ಪ್ರಾಥಮಿಕ ಶಾಲಾ ವಿದ್ಯಾರ್ಥಗಳಿಗೆ ಉಚಿತ ಸಮವಸ್ತ್ರ, ಪುಸ್ತಕ ಜೊತೆಗೆ ಸಮೀಪದ ಸುಮಾರು 5 ಶಾಲೆಗಳಿಗೆ ಉಚಿತ ಪುಸ್ತಕ ಹಾಗೂ ಶೈಕ್ಷಣಿಕ ಪರಿಕರಗಳನ್ನು ಆಶ್ರಮ ವಿತರಿಸುತ್ತಾ ಬಂದಿದೆ.ಸುಮಾರು 5 ಸಾವಿರಕ್ಕೂ ಮಿಕ್ಕಿ ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನದ ಸೌಲಭ್ಯವನ್ನು ಪಡೆದಿದ್ದಾರೆ.ಊರಿನ ಏಳ್ಗೆಗೆ ಹಾಗು ಸ್ವಚ್ಛತೆಗೆ, ಸ್ವಚ್ಛ ಭಾರತದ ಪರಿಕಲ್ಪನೆಯೊಂದಿಗೆ ಅಶಕ್ತರಿಗೆ ಶೌಚಾಲಯ ನಿರ್ಮಾಣಕ್ಕೆ ನೆರವು ನೀಡುತ್ತಾ ಗ್ರಾಮ ಸ್ವಚ್ಛತೆಗೂ ಆದ್ಯತೆ ನೀಡುತ್ತಿದೆ. ಬಡ ಮಹಿಳೆಯರ ಸಬಲೀಕರಣಕ್ಕೆ ಉಚಿತ ಟೈಲರಿಂಗ್ ತರಬೇತಿ , ಪೇಪರ್ ಕೈಚೀಲ ತಯಾರಿ ತರಬೇತಿ,ಸುಮಾರು 450 ಬಡ ಮಹಿಳೆಯರಿಗೆ ಪ್ರತಿ ವರ್ಷ ಆಶ್ರಮದ ವಾರ್ಷಿಕೋತ್ಸವದಂದು ಉಚಿತ ಸೀರೆ , ಧವಸ ಧಾನ್ಯಗಳನ್ನು,ಊಟದ ತಟ್ಟೆಗಳನ್ನು ವಿತರಿಸಲಾಗುತ್ತಿದೆ.ಜೊತೆಗೆ ಪ್ರತೀ ತಿಂಗಳು ಆಶ್ರಮದ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರವು ನಡೆಯುತ್ತಿದೆ.

ಡಿಜಿಟಲೀಕರಣಕ್ಕೆ ಪುಷ್ಠಿ ನೀಡಲು ಕಂಪ್ಯೂಟರ್ ತರಬೇತಿ ಕೇಂದ್ರವು ಗ್ರಾಮೀಣ ಭಾಗದ ಜನತೆಗೆ ಬಹಳಷ್ಟು ಉಪಯೋಗವಾಗಿದೆ.ಇವೆಲ್ಲಾ ಸಾಮಾಜಿಕ ಕಾರ್ಯಗಳ ವಿಸ್ತಾರವಾದರೆ ಆದ್ಯಾತಿಕ ವಿಚಾರಗಳಲ್ಲಿ ಆಶ್ರಮ ಉಚ್ಛ ಸ್ಥಾನದಲ್ಲಿ ಬಂದು ನಿಲ್ಲುವುದು .” ಮನೆ ಮನೆಗೆ ಶ್ರೀ ರಾಮಕೃಷ್ಣರ ಸಂದೇಶ” ಎಂಬ ಕಾರ್ಯಕ್ರಮದಂತೆ ಸ್ವಾಮೀಜಿಯವರು ಹಳ್ಳಿಯ ಮನೆಮನೆಗೆ ತೆರಳಿ ಭಜನೆ ಸತ್ಸಂಗಗಳನ್ನು ಕೈಗೊಳ್ಳುತ್ತಾರೆ. ನವರಾತ್ರಿಯ 9 ದಿನ 9 ಕುಮಾರಿಯರಿಗೆ ದೇವಿಯ ಅಲಂಕಾರ ಮಾಡಿಸಿ ಪೂಜೆ ಮಾಡುವ ವಿಶೇಷ ಆಚರಣೆ ಇಲ್ಲಿನ ಸಂಪ್ರದಾಯ. ಈ ವಿಶೇಷ ಸಂದರ್ಭವನ್ನು ಕಣ್ತುಂಬಿಕೊಳ್ಳುವುದು ನಮ್ಮ ಸೌಭಾಗ್ಯವೇ ಸರಿ. ಇನ್ನು ಕೃಷ್ಣ ಜನ್ಮಾಷ್ಟಮಿಯ 3 ದಿನದ ಕಾರ್ಯಕ್ರಮ ,ದಿವ್ಯತ್ರಯರ ಜಯಂತಿಗಳು , ಗುರುಪೂರ್ಣಿಮೆ, ಗಣೇಶ ಚತುರ್ತಿ ಕ್ರಿಸ್ಮಸ್ ,ಆಚರಣೆಗಳು ಒಂದೆಡೆಯಾದರೆ ,ದಿನನಿತ್ಯದ ಬೆಳಗಿನ ಆರತಿ ಪೂಜೆ ಮತ್ತು ಸಂದ್ಯಾರತಿ ,ಆದ್ಯಾತ್ಮಿಕ ಚಿಂತಕರ ಮನ ಸೆಳೆಯುತ್ತದೆ. ಜೊತೆಗೆ ಶಾಲಾ ವಿದ್ಯಾರ್ಥಿಗಳಿಗೆ ನೈತಿಕ ಮೌಲ್ಯ ಶಿಕ್ಷಣ ಆದ್ಯಾತ್ಮಿಕ ಶಿಕ್ಷಣದ ಕಾರ್ಯಗಾರಗಳೂ ನಡೆಯುತ್ತಿರುತ್ತವೆ.

ಈ ಲೇಖನದಲ್ಲಿ ಕಂಡು ಬಂದಿರುವ ಅಂಶಗಳೆಲ್ಲವೂ ಕೇವಲ ಪಕ್ಷಿನೋಟವಷ್ಟೆ.ಇನ್ನೂ ಈ ಆಶ್ರಮದ ಕುರಿತು ತಿಳಿಯಬೇಕೆಂದಿದ್ದರೆ ಒಮ್ಮೆಯಾದರೂ ಆಶ್ರಮಕ್ಕೆ ಭೇಟಿ ನೀಡಲೇ ಬೇಕು . ಮನಸ್ಸಿಗೆ ಮುದ ನೀಡುವುದರೊಂದಿಗೆ ಜೀವನೋತ್ಸಾಹವನ್ನು ನೀಡುವ ಸ್ಥಳ ರಾಮಕೃಷ್ಣ ತಪೋವನ ಎಂದರೆ ತಪ್ಪಾಗಲಾರದು. 
ಹೆಚ್ಚಿನ ಮಾಹಿತಿಗೆ  ಆಶ್ರಮದ  ಅಂತರ್ಜಾಲ ತಾಣ.

Pic Credit : suddi9 news Website
www.ramakrishnatapovan.org <http://www.ramakrishnatapovan.org> ಅಥಾವಾ ಮಿಂಚಂಚೆ  ramakrishnatapovan@gmail.com ಅಥವಾ ಮಿಂಚಂಚೆ ಮೂಲಕವೂ ಸಂಪರ್ಕಿಸಬಹುದು.
ಲೇಖನ: ಅಕ್ಷಯ್ ಜಿ ಭಟ್ ಎರ್ಮೆತ್ತೊಡಿ
ಫೋನ್:7795867853

No comments:

Post a Comment